ಕದಳಿ : ಈ ಸಂಸ್ಕೃತ ಪದಕ್ಕೆ ಬಾಳೆಯಗಿಡ, ಜಿಂಕೆ ಮುಂತಾದ ಅರ್ಥಗಳಿವೆ. ಕನ್ನಡದಲ್ಲಿ, ವಿಶೇಷತಃ ವಚನ ವಾಙ್ಮಯದಲ್ಲಿ, ಕದಳಿ ಅನೇಕ ಅರ್ಥಗಳಲ್ಲಿ ಬಳಕೆಯಲ್ಲಿರುವುದು ಕಂಡುಬರುತ್ತದೆ. ಶಿವಶರಣರು ಜೀವನದ ಪರಮಾದರ್ಶವನ್ನು, ಬಾಳಿನ ಬೆಳಕನ್ನು ಕದಳಿ ಎಂಬ ಪದದಿಂದ ಸೂಚಿಸಿದ್ದಾರೆ. ಅಕ್ಕಮಹಾದೇವಿ, ಲಿಂಗಮ್ಮ, ಸಿದ್ಧರಾಮೇಶ್ವರ, ಅಲ್ಲಮಪ್ರಭು ಮುಂತಾದವರ ವಚನಗಳಲ್ಲಿ ಕದಳಿ ಎಂಬ ಪದ ತಕ್ಕಷ್ಟು ಪ್ರಯುಕ್ತವಾಗಿದೆ.

ಕದಳಿಯೆಂಬುದು ತನು, ಕದಳಿಯೆಂಬುದು ಮನ,
ಕದಳಿಯೆಂಬುದು ವಿಷಯಂಗಳು;
ಕದಳಿಯೆಂಬುದು ಘನ ಘೋರಾರಣ್ಯ;
ಕದಳಿಯೆಂಬುದ ಗೆದ್ದು ಬದುಕೆ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು,
ಭವಗೆಟ್ಟು ಬಂದೆಯಾ ಮಗಳೆ-ಎಂದು
ಕರುಣದಿಂದ ತೆಗೆದು ಬಿಗಿಯಪ್ಪಿದಡೆ,
ಚನ್ನ ಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು

- ಎಂಬ ಅಕ್ಕನ ವಚನದಲ್ಲಿ ಬಾಳೆ, ಬಾಳು, ಹೃದಯಕಮಲ, ಭವಾರಣ್ಯ, ಅರಣ್ಯಮಧ್ಯೆ ಮುಂತಾದ ಅರ್ಥಗಳಲ್ಲಿ ಕದಳಿ ಪದವನ್ನು ಬಳಸಿರುವುದು ಕಂಡುಬರುತ್ತದೆ.

ಕರ್ಮವೆಂಬ ಕದಳಿ ಎನಗೆ,
ಕಾಯವೆಂಬ ಕದಳಿ ನಿನಗೆ,
ಮಾಟವೆಂಬ ಕದಳಿ ಬಸವಣ್ಣಂಗೆ-
ಬಂದ ಭಾವ ಸಲೆ ಸಂದಿತ್ತು,
ಎನ್ನಂಗದವಸಾನ (ವ) ಹೇಳಾ !
ಚನ್ನಮಲ್ಲಿಕಾರ್ಜುನಯ್ಯ

- ಎಂಬ ಅಕ್ಕನ ಇನ್ನೊಂದು ವಚನದಲ್ಲಿ ಕಾಣುವ ಕದಳಿ ಪದದ ಅಥವ್ಯಾಪ್ತಿ ವಸ್ತುಪರ ಎಂಬುದಕ್ಕಿಂತ ಭಾವಪರ ಎಂದು ಭಾವಿಸುವುದು ಸೂಕ್ತ.              (ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ